ಆರ್ಥಿಕತೆ ಉತ್ತೇಜನಕ್ಕೆ ಭರಪೂರ ಟಾನಿಕ್‌?

ಹೊಸದಿಲ್ಲಿ: ಆರ್ಥಿಕ ವ್ಯವಸ್ಥೆ ಬಲಪಡಿಸಲು ಕೇಂದ್ರ ಸರಕಾರವು, ಭಾರೀ ಪ್ರಮಾಣದಲ್ಲಿ ತೆರಿಗೆ ಕಡಿತ ಹಾಗೂ ಸುಧಾರಣೆ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಮುಂದಿನ ಫೆಬ್ರವರಿಗೆ ಕೇಂದ್ರ ಬಜೆಟ್‌ ಮಂಡಿಸಲಿದ್ದು, ಇದಕ್ಕೆ ನವೆಂಬರ್‌ನಲ್ಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ದೀರ್ಘಾವಧಿ ಬಂಡವಾಳ ಹೂಡಿಕೆ ಲಾಭ ತೆರಿಗೆ (ಎಲ್‌ಟಿಸಿಜಿ), ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಹಾಗೂ ಲಾಭಾಂಶ ಹಂಚಿಕೆ ತೆರಿಗೆ (ಡಿಡಿಟಿ)ಯನ್ನು ಕಡಿತಗೊಳಿಸುವ ಸಾಧ್ಯತೆ ಇದೆ.

ಈ ಸಂಬಂಧ ಪ್ರಧಾನಮಂತ್ರಿ ಕಾರ್ಯಾಲಯವು, ಹಣಕಾಸು ಸಚಿವಾಲಯದ ತೆರಿಗೆ ಇಲಾಖೆ ಹಾಗೂ ನೀತಿ ಆಯೋಗದ ಜೊತೆ ಚರ್ಚೆ ನಡೆಸುತ್ತಿದೆ. ನವೆಂಬರ್‌ ತಿಂಗಳಾಂತ್ಯದಲ್ಲಿ ಅಂತಿಮ ರೂಪುರೇಷೆ ನಿಗದಿಪಡಿಸಲಿದೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 3ರಂದು ಕೇಂದ್ರ ಬಜೆಟ್‌ ಮಂಡಿಸಲಿದ್ದು, ಇದಕ್ಕೂ ಮುನ್ನವೇ ತೆರಿಗೆ ಕಡಿತವನ್ನು ಘೋಷಿಸುವ ಸಂಭವ ಇದೆ.

ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಭಾರತದಲ್ಲಿ ಅಟೋಮೊಬೈಲ್‌ ಮತ್ತಿತರ ವಲಯಗಳಲ್ಲಿ ಹಿಂಜರಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜಿಎಸ್‌ಟಿ ಕಡಿತ ಸೇರಿದಂತೆ ಉದ್ಯಮಿಗಳಿಗೆ ಪೂರಕ ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹುಮ್ಮಸ್ಸು: ಸೆನ್ಸೆಕ್ಸ್‌ 581 ಅಂಕ ಏರಿಕೆ
ಈ ದೀಪಾವಳಿಯು ಷೇರು ಹೂಡಿಕೆದಾರರಿಗೆ ಹೊಸ ಭರವಸೆಯ ಬೆಳಕು ಮೂಡಿಸಿದ್ದು, ಹಬ್ಬದ ಮಾರನೇ ದಿನದ ವಹಿವಾಟಿನಲ್ಲೇ ಸೆನ್ಸೆಕ್ಸ್‌ ಭರ್ಜರಿ ಏರಿಕೆ ದಾಖಲಿಸಿದೆ. ಕೇಂದ್ರ ಸರಕಾರವು ಆರ್ಥಿಕತೆಗೆ ಉತ್ತೇಜನ ನೀಡಲು ಇನ್ನಷ್ಟು ಕ್ರಮಗಳನ್ನು ಘೋಷಿಸಲಿದೆ ಹಾಗೂ ಆದಾಯ ತೆರಿಗೆ ಕಡಿತ ಮಾಡಲಿದೆ ಎಂಬ ಸುದ್ದಿಯು ಹೂಡಿಕೆದಾರರಿಗೆ ಹುಮ್ಮಸ್ಸು ನೀಡಿದೆ.

ಪರಿಣಾಮ ಮಂಗಳವಾರ ಇವರು ಷೇರುಗಳ ಖರೀದಿಯಲ್ಲಿ ಆಸಕ್ತಿ ವಹಿಸಿದ ಕಾರಣ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 581 ಅಂಕ ಏರಿಕೆಯಾಗಿ, 39,831ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಇದು ಸುಮಾರು 4 ತಿಂಗಳ ಬಳಿಕದ ದಾಖಲೆಯಾಗಿದೆ. ಅದೇ ರೀತಿ ನಿಫ್ಟಿ 159 ಅಂಕ ಏರಿಕೆಯಾಗಿ ದಿನಾಂತ್ಯಕ್ಕೆ 11,786ಕ್ಕೆ ತಲುಪಿತು. ಟಾಟಾ ಮೋಟಾರ್ಸ್‌ ಷೇರುಗಳು ಶೇ.17, ಟಾಟಾ ಸ್ಟೀಲ್‌, ಯೆಸ್‌ ಬ್ಯಾಂಕ್‌, ಆಯಕ್ಸಿಸ್‌ ಬ್ಯಾಂಕ್‌, ಮಾರುತಿ ಸುಜುಕಿ, ಟಿಸಿಎಸ್‌ ಷೇರುಗಳು ಶೇ.7.09 ಹೆಚ್ಚಳ ಕಂಡವು.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Udayavani

Leave a Reply

Your email address will not be published. Required fields are marked *