ವಾರ್ನರ್‌, ಲಬುಶೇನ್‌ ಸತತ ಶತಕ ವೈಭವ

ಅಡಿಲೇಡ್‌: ಡೇವಿಡ್‌ ವಾರ್ನರ್‌ ಮತ್ತು ಮಾರ್ನಸ್‌ ಲಬುಶೇನ್‌ ಅವರ ಸತತ 2ನೇ ಶತಕ ಸಾಹಸದಿಂದ ಪಾಕಿಸ್ಥಾನ ವಿರುದ್ಧ ಶುಕ್ರವಾರ “ಅಡಿಲೇಡ್‌ ಓವಲ್‌’ನಲ್ಲಿ ಮೊದಲ್ಗೊಂಡ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯ ಬೃಹತ್‌ ಮೊತ್ತದತ್ತ ದಾಪುಗಾಲಿಕ್ಕಿದೆ.

ಮೊದಲ ದಿನದಾಟದ ಅಂತ್ಯಕ್ಕೆ ಕಾಂಗರೂ ಪಡೆ ಕೇವಲ ಒಂದು ವಿಕೆಟಿಗೆ 302 ರನ್‌ ಪೇರಿಸಿದೆ. ವಾರ್ನರ್‌ 166, ಲಬುಶೇನ್‌ 126 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದಾರೆ. ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯವನ್ನು ಇನ್ನಿಂಗ್ಸ್‌ ಅಂತರದಿಂದ ಜಯಿಸಿದ ಟಿಮ್‌ ಪೇನ್‌ ಪಡೆ 1-0 ಮುನ್ನಡೆಯಲ್ಲಿದೆ.

ಆಸೀಸ್‌ ಸ್ಕೋರ್‌ಬೋರ್ಡ್‌ನಲ್ಲಿ ಕೇವಲ 8 ರನ್‌ ಆದಾಗ ಜೋ ಬರ್ನ್ಸ್ (4) ವಿಕೆಟ್‌ ಉರುಳಿತು. ಆಗ 4ನೇ ಓವರ್‌ ಜಾರಿಯಲ್ಲಿತ್ತು. ಈ ಹಂತದಲ್ಲಿ ಜತೆಗೂಡಿದ ವಾರ್ನರ್‌- ಲಬುಶೇನ್‌ ಪಾಕ್‌ ಬೌಲರ್‌ಗಳನ್ನು ದಂಡಿಸುತ್ತ ಸಾಗಿದರು.
69.3 ಓವರ್‌ಗಳ ತನಕ ಕ್ರೀಸಿಗೆ ಅಂಟಿಕೊಂಡು ಮುರಿಯದ 2ನೇ ವಿಕೆಟಿಗೆ 294 ರನ್‌ ರಾಶಿ ಹಾಕಿದ್ದಾರೆ.

ಮುಂದುವರಿದ ಭಾಗ!
ವಾರ್ನರ್‌ ಮತ್ತು ಲಬುಶೇನ್‌ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲೂ ಸೆಂಚುರಿ ಹೊಡೆದು ಪಾಕ್‌ ಬೌಲರ್‌ಗಳಿಗೆ ಸವಾಲಾಗಿ ಉಳಿದಿದ್ದರು. ಅಲ್ಲಿ ಕ್ರಮವಾಗಿ 154 ಹಾಗೂ 185 ರನ್‌ ಬಾರಿಸಿದ್ದರು. ಇದರ ಮುಂದುವರಿದ ಭಾಗವನ್ನು ಅಡಿಲೇಡ್‌ನ‌ಲ್ಲಿ ಪ್ರದರ್ಶಿಸುತ್ತಿದ್ದಾರೆ.

ಡೇವಿಡ್‌ ವಾರ್ನರ್‌ ಗಳಿಕೆ 228 ಎಸೆತಗಳಿಂದ 166 ರನ್‌ (19 ಬೌಂಡರಿ). ಇದು 81ನೇ ಟೆಸ್ಟ್‌ನಲ್ಲಿ ವಾರ್ನರ್‌ ಬಾರಿಸಿದ 23ನೇ ಶತಕ. ಲಬುಶೇನ್‌ 11 ಟೆಸ್ಟ್‌ಗಳಲ್ಲಿ 2ನೇ ಸೆಂಚುರಿ ಹೊಡೆದು ತಮ್ಮ ಜಾಗಕ್ಕೆ ಸಿಮೆಂಟ್‌ ಹಾಕಿಕೊಂಡರು. 205 ಎಸೆತಗಳ ಈ ಸೊಗಸಾದ ಆಟದಲ್ಲಿ 17 ಬೌಂಡರಿ ಸೇರಿದೆ. ಏಕೈಕ ವಿಕೆಟ್‌ ಶಹೀನ್‌ ಅಫ್ರಿದಿ ಪಾಲಾಯಿತು.

TheLogicalNews

Disclaimer: This story is auto-aggregated by a computer program and has not been created or edited by TheLogicalNews. Publisher: Udayavani

Leave a Reply

Your email address will not be published. Required fields are marked *